ಟೆಂಟ್ಯಾಕ್ಯುಲಿಫೆರ
ಪ್ರೋಟೊeóÉೂೀವ ವಿಭಾಗಕ್ಕೆ ಸೇರಿದ ಒಂದು ವರ್ಗ, ಇದಕ್ಕೆ ಆ್ಯಸಿನೇಟ, ಆ್ಯಸಿನೇಟೇರಿಯ ಮತ್ತು ಸಕ್ಟೋರಿಯ ಎಂಬ ಹೆಸರುಗಳೂ ಉಂಟು. ನೀರಿನಲ್ಲಿರುವ ಸಸ್ಯ, ಪ್ರಾಣಿ ಹಾಗೂ ನಿರ್ಜೀವ ಪದಾರ್ಥಗಳಿಗೆ ಅಂಟಿಕೊಂಡು ಜೀವಿಸುತ್ತವೆ. ಅಪ್ರಬುದ್ಧ ಅವಸ್ಥೆಯಲ್ಲಿ ಮಾತ್ರ ಶಿಲಕೆಗಳಿವೆ. ಇಂಥವು ಸ್ವತಂತ್ರವಾಗಿ ಈಜಬಲ್ಲವು. ಇವು ಬೆಳೆದು ದೊಡ್ಡವಾದಾಗ ಶಿಲಕೆಗಳಾಗಲಿ ಬೇರೆ ತರದ ಚಲನಾಂಗಗಳಾಗಲಿ ಕಂಡುಬರುವುದಿಲ್ಲ. ಆಹಾರವನ್ನು ಹಿಡಿದು ಭಕ್ಷಿಸಲು ಸ್ಪರ್ಶಕಗಳು (ಟೆಂಟಕಲ್ಸ್) ಇವೆ. ಬಾಯಿ ಇಲ್ಲ. ಸ್ಪರ್ಶಕಗಳು ಎರಡು ಬಗೆಯವು; ಒಂದರ ತುದಿಯಲ್ಲಿ ಗುಂಡನೆಯ ಗಂಟುಗಳಿವೆ. ಇನ್ನೊಂದರ ತುದಿಗಳು ಚೂಪಾಗಿವೆ. ನೀರಿನಲ್ಲಿ ವಾಸಿಸುವ ಸೂಕ್ಷ್ಮ ಜೀವಿಗಳೇ ಇವುಗಳ ಆಹಾರ. ಈ ಪ್ರಾಣಿಗಳು ಸ್ಪರ್ಶಕಕ್ಕೆ ಆಕಸ್ಮಾತ್ತಾಗಿ ತಾಗಿದಾಗ, ಅದಕ್ಕೆ ಅಂಟಿಕೊಂಡು ಸ್ಪರ್ಶಕ ಸ್ರವಿಸುವ ವಿಷದಿಂದ ನಿಶ್ಚೇತನಗೊಳ್ಳುವುವು. ತರುವಾಯ ಸ್ಪರ್ಶಕಗಳು ತಮ್ಮಲ್ಲಿಯ ನಳಿಕೆಯ ಮೂಲಕ ಆಹಾರವನ್ನು ಹೀರಿಕೊಳ್ಳುತ್ತವೆ. ದೇಹದೊಳಗೆ ಒಂದು ಇಲ್ಲವೆ ಹೆಚ್ಚು ಸಂಖ್ಯೆಯ ಸಂಕೋಚನಾವಕಾಶಗಳುಂಟು. ಉಳಿದ ಸಿಲಿಯೇಟಗಳಲ್ಲಿರುವಂತೆ ಇವುಗಳಲ್ಲೂ ಎರಡು ಬಗೆಯ ಕೋಶಕೇಂದ್ರಗಳಿವೆ: ಮ್ಯಾಕ್ರೊನ್ಯೂಕ್ಲಿಯಸ್ ಮತ್ತು ಮೈಕ್ರೊನ್ಯೂಕ್ಲಿಯಸ್. ಮೊದಲ ಬಗೆಯದು ಒಂಟಿ; ಇದರ ಆಕಾರ ಅಂಡದಂತೆ, ಕೆಲವು ಸಲ ಕವಲೊಡೆದಿರುವುದುಂಟು. ಎರಡನೆಯ ಬಗೆಯದು ಒಂಟಿಯಾಗಿರಬಹುದು ಇಲ್ಲವೆ ಹೆಚ್ಚು ಸಂಖ್ಯೆಯಲ್ಲಿರಬಹುದು. ಸಂತಾನಕ್ರಿಯೆ ನಿರ್ಲಿಂಗ ಮತ್ತು ಲೈಂಗಿಕ ರೀತಿಯಲ್ಲಿ ನಡೆಯುತ್ತದೆ. ನಿರ್ಲಿಂಗರೀತಿಯಲ್ಲಿ ದ್ವಿಖಂಡನ (ಬೈನರಿ ಫಿಶನ್) ಇಲ್ಲವೆ ಅಂಕುರೋತ್ಪತ್ತಿ ಎಂಬ ಎರಡು ಬಗೆಗಳುಂಟು. ಅಂಕುರಗಳು ದೇಹದ ಒಳಗೆ ಇಲ್ಲವೆ ಹೊರಭಾಗದಲ್ಲಿ ಉತ್ಪತ್ತಿಯಾಗಿ, ತಾಯಿಯಿಂದ ಬೇರ್ಪಟ್ಟು ಶಿಲಕೆಗಳ ಸಹಾಯದಿಂದ ಈಜುತ್ತ ಕೊನೆಗೆ ಯಾವುದಾದರೊಂದು ವಸ್ತುವಿಗೆ ಅಂಟಿಕೊಂಡು ಪ್ರೌಢಾವಸ್ಥೆಯನ್ನು ತಲುಪಿ ಸ್ವತಂತ್ರವಾಗಿ ಜೀವಿಸುವುವು. ಲೈಂಗಿಕ ರೀತಿಯ ಪ್ರಜನನದಲ್ಲಿ ಎರಡು ಪ್ರಾಣಿಗಳು ಒಂದನ್ನೊಂದು ಸಂಧಿಸಿ ಒಂದರಲ್ಲಿ ಇನ್ನೊಂದು ಬೆರೆತು ಕೋಶಕೇಂದ್ರ ವಸ್ತುವನ್ನು ವಿನಿಮಯ ಮಾಡಿಕೊಳ್ಳುವುವು.
(ಎಸ್.ಬಿ.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ